ವೀರಕೇಸರಿ ವಿವೇಕಾನಂದ!


ಅದು ಜನವರಿ ತಿಂಗಳ ಮಾಗಿಯ ಕಾಲದ ಪುಣ್ಯ ದಿನ. ಕನ್ಯಾಕುಮಾರಿಯ ಪವಿತ್ರ ದೇವಸ್ಥಾನದಲ್ಲಿ ಅರ್ಚಕರು ಮುಂಜಾನೆಯಲ್ಲಿ ಎಂದಿನಂತೆ ತಮ್ಮ ದಿನ ನಿತ್ಯದ ಕೆಲಸಗಳಲ್ಲಿ ನಿರತರಾಗಿದ್ದರು. ಸ್ವಲ್ಪ ಹೊತ್ತಿನ ಬಳಿಕ ಆ ಅರ್ಚಕರ ಗಮನ ದೇವಸ್ಥಾನದ ಹೆಬ್ಬಾಗಿಲ ಕಡೆಗೆ ಹೋಯಿತು. ಯಾರೋ ತರುಣ ಸಂನ್ಯಾಸಿ ಒಳಗೆ ಪ್ರವೇಶಿಸಿದ. ದೇವರಿಗೆ ಉದ್ದಂಡ ನಮಸ್ಕರಿಸಿ ಎದ್ದು ನಿಂತನು. ಅರ್ಚಕನು ಆ 'ಮೂವತ್ತರ ಹರೆಯದ' ಆ ಸಂನ್ಯಾಸಿಯನ್ನೇ ದಿಟ್ಟಿಸಿ ನೋಡುತ್ತಿದ್ದ. ಸುಮಾರು ಐದುಮುಕ್ಕಾಲು ಅಡಿ ಎತ್ತರದ ಜೀವವದು, ವಿಶಾಲವಾದ ಬಾಹುಗಳನ್ನು ಹೊಂದಿದ್ದ ಆ ಸಂನ್ಯಾಸಿ ಥೇಟ್ ಕುಸ್ತಿ ಪಟುವಿನಂತೆ ಕಾಣುತ್ತಿದ್ದ. ವಜ್ರಶರೀರಿಯಾಗಿದ್ದ ಆತನ ದೇಹ ಮತ್ತು ಕಬ್ಬಿಣದ ಮಾಂಸಖಂಡಗಳನ್ನು ಹೊಂದಿದ್ದ ಆತ ಯಾವುದೇ ಕ್ರೀಡೆ ಬೇಕಾದರೂ ಲೀಲಾಜಾಲವಾಗಿ ಆಡಲು ಸಿದ್ಧನಾಗಿದ್ದನು! ಅವನ ಮನಮೋಹಕ ನಯನಗಳು ಎಂಥವರನ್ನಾದರೂ ಆಕರ್ಷಿಸುವಂತಿತ್ತು! ಅವನ ಕಣ್ಣುಗಳಲ್ಲಿ ಸಾಕ್ಷಾತ್ ಪರಶಿವನು ತಾಂಡವವಾಡುತ್ತಿದ್ದನು! ಅಲ್ಲಿದ ಎಲ್ಲಾ ಸಂನ್ಯಾಸಿಗಳಿಗಿಂತಲೂ ಭಿನ್ನನಾಗಿದ್ದನು ಆತ. ಒಂದು ಕೈಯಲ್ಲಿ ಕಮಂಡಲ, ಇನ್ನೊಂದು ಕೈಯಲ್ಲಿ 'ಭಗವದ್ಗೀತೆ' ಮತ್ತು 'ಬೈಬಲ್'. ಒಬ್ಬ ಸಂನ್ಯಾಸಿಯ ಬಳಿ ಇಷ್ಟಲ್ಲದೇ ಇನ್ನೇನು ಇರಬಲ್ಲದು? ತಲೆಗೆ ಸುತ್ತಿಕೊಂಡು ಪೇಟ ಅವನ ಸೌಂದರ್ಯವನ್ನು ಹಿಮ್ಮಡಿಸಿತ್ತು! ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಕಾಲ್ನಡಿಗೆಯಲ್ಲೇ ಸಂಚರಿಸಿದ್ದರೂ ಆತನ ದೇಹ ಒಂದಿನಿತೂ ಕದಲಿರಲಿಲ್ಲ! ನೋಡುನೋಡುತ್ತಿದ್ದಂತೆಯೇ ಆ ಸಂನ್ಯಾಸಿ ಸಮುದ್ರ ತೀರದ ಬಳಿ ಬಂದನು. ವಿಶಾಲವಾದ ಹಿಂದೂ ಸಾಗರವನ್ನ ದಿಟ್ಟಿಸಿ ನೋಡಿದ, ದೂರದಲ್ಲಿ ಒಂದು ದೊಡ್ಡ ಬಂಡೆಯನ್ನು ನೋಡಿದ. ಅದನ್ನೇರಬೇಕೆಂದು ಮನಸ್ಸಾಯಿತು ಆತನಿಗೆ! ಆದರೆ ಹೇಗೆ ಹೋಗೋದು? ದೋಣಿಯವನಿಗೆ 'ಒಯ್ದು ಬಿಡು' ಎನ್ನುವಷ್ಟು ಹಣವಿಲ್ಲ. ಅವನ ಎದೆಯಲ್ಲಿ ಉರಿಯುತ್ತಿದ್ದುದು ತಾರುಣ್ಯದ ಉತ್ಸಾಹ! ಅಕ್ಕ-ಪಕ್ಕ ನೋಡಿದನು. ಸುತ್ತಲಿನವರು ನೋಡುನೋಡುತ್ತಿದ್ದಂತೆಯೇ ಆ 'ವೀರಸಂನ್ಯಾಸಿ' ಸಮುದ್ರಕ್ಕೆ ಹಾರಿಯೇಬಿಟ್ಟನು!!!
ಅಲೆಗಳನ್ನು ಸೀಳಿಕೊಂಡು ಈಜಿ ಆ ಬಂಡೆಯನ್ನೇರಿಯೇಬಿಟ್ಟನು! ತನ್ನ ಪೇಟವನ್ನು ತೆಗೆದನು, ಧ್ಯಾನಾಶಕ್ತಿ ಜಾಗೃತವಾಯಿತು, ಧ್ಯಾನಕ್ಕೆ ಕುಳಿತೇಬಿಟ್ಟನು! ಮೂರು ಹಗಲು, ಮೂರು ರಾತ್ರಿ ಈ ದೇಶದ ದಾರುಣ ಸ್ಥಿತಿಯನ್ನು ನೆನೆದು ಕಣ್ಣೀರಿಟ್ಟನು! ಈ ದೇಶದ ದಾರಿದ್ರ್ಯವನ್ನು ನೆನೆದು ಕಣ್ಣೀರಿಟ್ಟನು! ಈ ದೇಶದ ಮೂಢನಂಬಿಕೆಗಳನ್ನು ನೆನೆದು ಕಣ್ಣೀರಿಟ್ಟನು! ಈ ದೇಶದ 'ನಾ ಮೇಲು-ನೀ ಕೀಳು' ಎಂಬ ಜಾತಿಯ ಪದ್ದತಿಗಳನ್ನು ನೆನೆದು ಕಣ್ಣೀರಿಟ್ಟನು! ಅಷ್ಟರಲ್ಲೇ ಮೂರು ದಿನಗಳಾಗಿತ್ತು. ಆ ಸಂನ್ಯಾಸಿಯ ತಪಸ್ಸು ವ್ಯರ್ಥವಾಗಲಿಲ್ಲ!
ಮೂರು ದಿನಗಳ ನಂತರ ಸಾಕ್ಷಾತ್ 'ಭಾರತ ಮಾತೆ' ದರ್ಶನ ಕೊಟ್ಟಳು! ಸಂತೋಷಗೊಂಡ ಆ ತರುಣನು ತನ್ನ ಅಳಲನ್ನು ತೋಡಿಕೊಂಡನು "ಹೇ ತಾಯಿ! ನಾವು ಸಂನ್ಯಾಸಿಗಳು ನಿನಗಾಗಿ ಏನು ಮಾಡಿದ್ದೇವೆ? ಈ ದೇಶದ ಜನರಿಗೆ ಏನು ತಾನೆ ಮಾಡಿದ್ದೇವೆ? ಬರೀ ತತ್ವಭೋಧನೆ! ತತ್ವಭೋಧನೆ! ಚೀ! ನಾಚಿಕೆಯಾಗಬೇಕು ನಮಗೆ! ಹೊಟ್ಟೆಗೆ ಹಿಟ್ಟಿಲ್ಲದೇ ನನ್ನ ಜನ ಸಾಯುತ್ತಿದ್ದಾರೆ, ನಾವು ನೋಡಿದರೆ ಅವರಿಗೆ ತತ್ವಭೋಧನೆ ಮಾಡುತ್ತಿದ್ದೇವೆ! ಈ ತತ್ವಭೋಧನೆಗಳಿಗೆ ಬೆಂಕಿ ಬೀಳಲಿ! ಹಸಿದ ಕುರಿಗಳಿಗೆ ವೇದಾಂತ ಹೇಳುತ್ತಿರುವ ನಾವು ನಿರ್ವೀರ್ಯರೇ ಸರಿ! ಹೇ ಭಾರತಮಾತೆ ಈ ನಿನ್ನ ಮಕ್ಕಳನ್ನು ರಕ್ಷಿಸು"ಎಂದು ಕಣ್ಣೀರಾಕಿದ ಆ ಪ್ರೇಮಮೂರ್ತಿ!  ಅಷ್ಟರಲ್ಲೇ" ನರೇನ್!!" ಎಂದು ಧ್ವನಿ ಕೇಳಿಸಿತು. ಯಾರೆಂದು ಆ ಸಂನ್ಯಾಸಿ ನೋಡಿದರೆ, ತನ್ನ ಪ್ರೀತಿಯ ಗುರುದೇವ ರಾಮಕೃಷ್ಣ ಪರಮಹಂಸರು ಸಮುದ್ರದ ಮೇಲೆ ನಡೆದುಕೊಂಡು ಬರುತ್ತಿದ್ದಾರೆ. 'ಗುರುಮಹಾರಾಜರು' 'ಪಶ್ಚಿಮ'ದ ಕಡೆ ಕೈ ಬೀಸಿ ಕರೆಯುತ್ತಿದ್ದಾರೆ! ಸಿಂಹನ ಸಂದೇಶ ಮರಿ ಸಿಂಹನಿಗೆ ತಿಳಿಯದಿದ್ದರೆ ಹೇಗೆ? 'ವೀರ ನರೇಂದ್ರ' ಜೋರಾಗಿ ಗುಡುಗಿದ  "ಹೇ ತಾಯಿ! ಇಂದು ನನಗೆ ನನ್ನ ಜನ್ಮೋದ್ದೇಶ ತಿಳಿಯಿತು. ನಾನು ಪಶ್ಚಿಮಕ್ಕೆ ಹೋಗುತ್ತೇನೆ! ನಾನು ಸಮುದ್ರವನ್ನು ದಾಟುತ್ತೇನೆ! ನನ್ನ ಮೇಧಾಶಕ್ತಿಯಿಂದ ಪಾಶ್ಚಾತ್ಯರಿಗೆ ವೇದಾಂತ ಹೇಳುತ್ತೇನೆ! ಅವರಿಗೆ ನಿಜವಾದ ಧರ್ಮ ಬೋಧನೆ ಮಾಡುತ್ತೇನೆ! ಸಂನ್ಯಾಸ ಧರ್ಮಕ್ಕೆ ವಿರುದ್ಧವಾದ 'ಧನ-ಸಂಗ್ರಹಣೆ' ಮಾಡುತ್ತೇನೆ! ಆ ಹಣದಿಂದ ನನ್ನ ಭಾರತೀಯರ ಉದ್ಧಾರ ಮಾಡುತ್ತೇನೆ! ಅವರ ಉದ್ಧಾರಕ್ಕಾಗಿ ನನ್ನ ಮೋಕ್ಷವನ್ನೇ ತ್ಯಾಗ ಮಾಡುತ್ತೇನೆ! ಯಾರಿಗೆ ಬೇಕು ಈ ಮೋಕ್ಷ? ನನಗೆ ಬೇಕಾಗಿರುವುದು ನನ್ನ ಭಾರತದ ಉದ್ಧಾರ!ನನಗೆ ಯಾವ 'ನಿರ್ವಿಕಲ್ಪ ಸಮಾಧಿ' ಯೂ ಬೇಡ! ಈ ರಾಷ್ಟ್ರ ಮತ್ತೆ 'ವಿಶ್ವಗುರು' ವಾಗಬೇಕು! ಹಿಂದಿನ ಶಾಸ್ತ್ರಗಳು ಹೇಳಿತು 'ಮಾತೃದೇವೋಭವ' 'ಪಿತೃದೇವೋಭವ'' ಆಚಾರ್ಯದೇವೋಭವ' ಎಂದು. ಆದರೆ ಇಂದು ನಾನು ಹೇಳುತ್ತಿದ್ದೇನೆ ' ದೀನದೇವೋಭವ'  ' ಮೂರ್ಖದೇವೋಭವ' ' ದರಿದ್ರದೇವೋಭವ' ಎಂದು. ನನ್ನ ಇಷ್ಟು ವರ್ಷಗಳ ಸಾಧನೆಯ ನಂತರ ಇಂದು ನನಗೆ ಅರಿವಾಗಿದೆ, ಭಗವಂತ ಬರೀ ಗರ್ಭಗುಡಿಯಲ್ಲಿಲ್ಲ, ಪ್ರತಿಯೊಬ್ಬ ಮಾನವನ ಹೃದಯದಲ್ಲಿ ಅಡಗಿದ್ದಾನೆ! ಈ ಯುದ್ಧದಲ್ಲಿ ನಾನು ಗೆದ್ದೇ ಗೆಲ್ಲುತ್ತೇನೆ! ಇಲ್ಲವಾದರೆ ಮಡಿಯುತ್ತೇನೆ! ಸೋಲುವ ಮಾತೇ ಇಲ್ಲ!" 
ಆ ವೀರಸಂನ್ಯಾಸಿಯ ಘರ್ಜನೆಗೆ ಆ ವಿಧಿ ಕೂಡ ಕಂಪಿಸಿತು! ಸಮುದ್ರ ರಾಜನು ಆತನಿಗೆ ತಲೆಬಾಗಿ ನಮಸ್ಕರಿಸಿದನು!ಆ 'ವಿಶ್ವಧರ್ಮ ಸಮ್ಮೇಳನ'ವೂ ಕೂಡ ಕಂಪಿಸಿತು ಇವನ ಆರ್ಭಟಕ್ಕೆ! ಸಾಕ್ಷಾತ್ ಭಾರತ ಮಾತೆಯು ಭಾವುಕಳಾಗಿ ಆತನನ್ನು ಹರಸಿದಳು. ಸಮುದ್ರ ಪಕ್ಷಿಗಳು" ಯಾರು ಈ ಗಂಡುಗಲಿ? ಎಂದು ಯೋಚಿಸುತ್ತಾ ಹೀಗೆ ಕೇಳಲಾರಂಭಿಸಿದವು - 
"ಯಾರಿವನು?" 
"ಯಾರಿವನು?" 
"ಯಾರಿವನು?" 

ಅವನೇ 'ವೀರಕೇಸರಿ ವಿವೇಕಾನಂದ!'


 ಸ್ವಾಮಿ ವಿವೇಕಾನಂದರು ಅಮೇರಿಕಾದ ಚಿಕಾಗೊ ನಗರದ 'ವಿಶ್ವಧರ್ಮ ಸಮ್ಮೇಳನ'ದಲ್ಲಿ ದಿಗ್ವಿಜಯವನ್ನು ಬಾರಿಸಿದ್ದು ನಮಗೆಲ್ಲ ಗೊತ್ತೇ ಇದೆ. ಆದರೆ ಅದಕ್ಕೆ ಅವರು ಮಾಡಿದ ಹರಸಾಹಸ ಮಾತ್ರ ಅಷ್ಟಿಷ್ಟಲ್ಲ! ಪರಿವ್ರಾಜಕರಾಗಿ ಈ ದೇಶವನ್ನು ಕಾಲ್ನಡಿಗೆಯಲ್ಲೇ ಸಂಚರಿಸುವಾಗ ಈ 'ವಿಶ್ವಧರ್ಮ ಸಮ್ಮೇಳನದ' ಬಗ್ಗೆ ಕೇಳಿದರು. ಅದರಲ್ಲಿ ಭಾಗವಹಿಸುವದರ ಬಗ್ಗೆ ಆಲೋಚಿಸಿದರೂ ತಡವಾಗಿ ನಿರ್ಧಾರತೆತೆಗೆದುಕೊಂಡರು. ಸರಿ; ಪ್ರಯಾಣಕ್ಕೆ ನಿಧಿ ಸಂಗ್ರಹಣೆ ಶುರುವಾಯಿತು. ಸ್ವಾಮೀಜಿಯ ಮದ್ರಾಸ್ ಶಿಷ್ಯರು ಹಣವನ್ನು ಸಂಗ್ರಹಿಸಿದರು. ಎಲ್ಲಾ ಸೇರಿ ಸುಮಾರು ನಾಲ್ಕು ಸಾವಿರ ರೂಪಾಯಿ ನಷ್ಟು ಹಣ ಸಂಗ್ರಹವಾಯಿತು. ಮದ್ರಾಸಿನ ಮೂಲಕವಾಗಿ ಹಡಗಿನಲ್ಲಿ ಪ್ರಯಾಣ ಮಾಡುವುದೆಂದು ನಿಶ್ಚಯವಾಯಿತು. ಆದರೆ ದೇವರ ಇಚ್ಛೆಯೇ ಬೇರೆ!! ಅದೊಂದು ದಿನ ಖೇತ್ರಿಯ ಮಹಾರಾಜನ ಆಪ್ತಕಾರ್ಯದರ್ಶಿಯಾದ 'ಜಗಮೋಹನ್' ಮದ್ರಾಸಿಗೆ ಬಂದಿಳಿದನು. ಸ್ವಾಮೀಜಿಯನ್ನು ಭೇಟಿ ಮಾಡಿದ ಅವನು " ಸ್ವಾಮೀಜಿ, ನಿಮ್ಮ ಆಶೀರ್ವಾದದಿಂದ ನಮ್ಮ ಮಹಾರಾಜರಿಗೆ ಗಂಡು ಮಗುವಾಗಿದೆ. ಮಗುವಿನ ನಾಮಕರಣ ಸಮಾರಂಭಕ್ಕೆ ನೀವು ಬರಬೇಕು ಎಂದು ನಮ್ಮ ಮಹಾರಾಜರು ಆಶಿಸುತ್ತಾರೆ" ಎಂದು ಹೇಳಿದನು. "ಇಲ್ಲಪ ನಾನು ಅಮೇರಿಕಾಗೆ ಹೋಗಬೇಕಾಗಿದೆ. ನಾನು ಬರಲು ಆಗುವುದಿಲ್ಲ" ಎಂದು ಸ್ವಾಮೀಜಿ ಹೇಳಿದರು. ಆದರೆ ಜಗಮೋಹನ್ ಸ್ವಾಮೀಜಿಯನ್ನು ಬರೋವರೆಗೂ ಬಿಡಲಿಲ್ಲ. ಅಂತೂ ಸ್ವಾಮೀಜಿ ಖೇತ್ರಿಗೆ ಹೋಗಲು ಒಪ್ಪಿದರು. ಟ್ರೈನಿನ ಮೂಲಕ ಸ್ವಾಮೀಜಿ ಜಗಮೋಹನ್ ಜೊತೆ ಖೇತ್ರಿಗೆ ತಲುಪಿದರು. ಮಹಾರಾಜ ಅಜಿತ್ ಸಿಂಗ್ ಅವರನ್ನು ಆದರದಿಂದ ಸ್ವಾಗತಿಸಿದರು. ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ನಂತರ ಮಹಾರಾಜ
"ಸ್ವಾಮೀಜಿ, ನಿಮ್ಮನ್ನು ಅಮೇರಿಕಾಗೆ ಕಳುಹಿಸಿಕೊಡುವ ಜವಾಬ್ದಾರಿ ನನ್ನದು! ಎಂದು ಆಶ್ವಾಸನೆ ನೀಡಿದರು!
"ಸ್ವಾಮೀಜಿ ನೀವು 'ವಿವಿದಿಶಾನಂದ', 'ಸಚ್ಚಿದಾನಂದ' ಮುಂತಾದ ಹೆಸರುಗಳಿಂದ ಕರೆಯಲ್ಪಡುತ್ತಿದ್ದೀರಿ. ಇನ್ನು ಮುಂದೆ ನಿಮ್ಮ ಹೆಸರು 'ವಿವೇಕಾನಂದ' ಅಂತ ಇರಲಿ. ದಯಮಾಡಿ ಒಪ್ಪಿಕೊಳ್ಳಿ" ಎಂದು ಕೇಳಿಕೊಂಡರು.
ಸ್ವಾಮೀಜಿ ಇದಕೀ ಒಪ್ಪಿಕೊಂಡಿಯೇಬಿಟ್ಟರು!! ಅಂದಿನಿಂದ ಸ್ವಾಮೀಜಿ 'ಸ್ವಾಮಿ ವಿವೇಕಾನಂದ'ರೆಂದು ಪ್ರಸಿದ್ಧರಾದರು!

ಸ್ವಾಮೀಜಿ ಮಹಾರಾಜನ ಮಗನ ನಾಮಕರಣಕ್ಕೆ ಹೋಗಿದ್ದರು; ಆದರೆ ಈ ಪುಣ್ಯಾತ್ಮ ಸ್ವಾಮೀಜಿಗೆ ನಾಮಕರಣ ಮಾಡಿಬಿಟ್ಪ! ಸರಿ ಈಗ ಮುಂಬಯಿಯಿಂದ ಅಮೇರಿಕಾಕ್ಕೆ ಹೋಗುವ ನಿರ್ಧಾರವಾಯಿತು. ನನಗೆ ಸ್ವಾಮೀಜಿ ಇಷ್ಟವಾಗುವುದು ಅವರ ಅನೇಕ ಗುಣಗಳಿಗೆ.
ಅವರು ತಮ್ಮ ಸ್ವಾಭಿಮಾನ ಮತ್ತು ಆತ್ಮಗೌರವಕ್ಕೆ    ಧಕ್ಕೆ ಬಂದರೆ ಅದನ್ನು ಮುಲಾಜಿಲ್ಲದೇ ಖಂಡಿಸುತ್ತಿದ್ದರು. ಈ ಘಟನೆಯೊಂದು ಅವರು ಪ್ರಯಾಣಿಸುತ್ತಿದ್ದ ಟ್ರೈನಿನಲ್ಲಿ ನಡೆಯಿತು. ಸ್ವಾಮೀಜಿ ಹಾಗೂ ಜಗಮೋಹನ ಒಂದೇ ಭೋಗಿಯಲ್ಲಿದ್ದರು. ಸ್ವಾಮೀಜಿ ಒಬ್ಬ ರೈಲ್ವೆ ಅಧಿಕಾರಿಯ ಜೊತೆ ಮಾತಾನಾಡುತ್ತಿದ್ದರು. ಆಗ ಒಬ್ಬ ಐರೋಪ್ಯ ಟಿ.ಸಿ.
ಆ ಅಧಿಕಾರಿಯನ್ನು ದರ್ಪದಿಂದ " ಏಯ್! ಕೆಳಗೆ ಇಳಿಯೊ!" ಎಂದು ಕಿರುಚಿದ. ಸ್ವಾಮೀಜಿಗೆ ಕೋಪ ಬಂದಿತು. ವಿದೇಶಿಯರು ಭಾರತೀಯರ ಮೇಲೆ ನಡೆಸುತ್ತಿದ್ದ ದೌರ್ಜನ್ಯವನ್ನು ಕಂಡು ಕೆಂಡಾ ಮಂಡಲಾದರು. ಅವರು ಅವರಿಬ್ಬರ ಸಂಭಾಷಣೆಯನ್ನು ಮಧ್ಯ ಪ್ರವೇಶಿಸಿದರು. ಆಗ ಆಗ ಆ ಟಿ.ಸಿ ಕೋಪದಿಂದ " ತುಮ್ ಕೌನ್ ಹಮಾರ ಬೀಚ್ ಮೆ ಆನೆ ಕೆ ಲಿಯೆ?" (ನಮ್ಮಿಬ್ಬರ ನಡುವೆ ಮಧ್ಯ ಬರಲು ನೀನ್ಯಾರು) ಈ ಸಂನ್ಯಾಸಿಗೆ ಹಿಂದಿ ಬರುವುದಿಲ್ಲ ಎಂದು ಅವನು ಭಾವಿಸಿದ್ದ. ಆದರೆ ಸ್ವಾಮೀಜಿ ಎಲ್ಲಾ ಭಾಷೆಯನ್ನು ಅರೆದು ಕುಡಿದಿದ್ದು ಈ ಮುಠ್ಠಾಲನಿಗೆ
ಹೇಗೆ ತಿಳಿಯಬೇಕು? ಸ್ವಾಮೀಜಿ ಕೋಪಗೊಂಡು " ಏನಯ್ಯಾ 'ತುಮ್' ಎಂದು ಹೇಳುತ್ತಿದ್ದೀಯ? 'ಆಪ್'(ನೀವು) ಎಂದು ಹೇಳೋದಕ್ಕೆ ನಿಂಗೇನು? ಮೊದಲು ಮರ್ಯಾದೆ ಕೊಡೋದನ್ನ ಕಲಿ!" ಎಂದು ಇಂಗ್ಲೀಷ್ನಲ್ಲಿ ಗುಡುಗಿದರು. ಟಿ. ಸಿ ಗೆ ಸಿಡಿಲು ಬಡಿದ ಹಾಗೆ ಆಯಿತು. ಅವನು ಸ್ವಾಮೀಜಿಯ ಇಂಗ್ಲೀಷ್ ಮಾತನ್ನು ಕೇಳಿ ಮೂಕವಿಸ್ಮಿತನಾದ! ಅಲ್ಲಿಂದ ಓಟ ಕಿತ್ತ!! ಮುಂಬಯಿಗೆ ತಲುಪಿದ ಮೇಲೆ ಜಗಮೋಹನ ಮತ್ತು 'ಅಳಸಿಂಗ ಪೆರುಮಾಳ್' 
(ಸ್ವಾಮೀಜಿಯ ನೆಚ್ಚಿನ ಮದ್ರಾಸಿನ ಶಿಷ್ಯ) ಅವರಿಗೆ ಬೇಕಾದ  ರೇಷ್ಮೆಯ ಸೂಟು, ನಿಲುವಂಗಿ, ಪೇಟವನ್ನು ಕೊಡಿಸಿ ಹಣ ತುಂಬಿದ್ದ ಪರ್ಸ್ ನ್ನು ಅವರ ಕೈಗಿತ್ತರು. ಹಡಗಿನ ಟಿಕೆಟ್ ಕೂಡ ಜಗಮೋಹನ ಕೊಡಿಸಿದ.




ಮೇ 31, 1893 ರಂದು 'Penisular'(ಪೆನಿನ್ಸುಲಾರ್) ಎಂಬ ಹಡಗು ಮುಂಬಯಿ ಯಿಂದ ಅಮೇರಿಕಾಕ್ಕೆ ಹೊರಟಿತು. ಜಗಮೋಹನ ಹಾಗೂ ಅಳಸಿಂಗ ಪೆರುಮಾಳ್ ತಮ್ಮ ನೆಚ್ಚಿನ ಸ್ವಾಮೀಜಿಯನ್ನು ಬೀಳ್ಕೊಂಡರು. ಅವರ ಕಣ್ಣುಗಳಲ್ಲಿ ಅಶ್ರುಧಾರೆ ತುಂಬಿತು. ಸ್ವಾಮೀಜಿ ಹಡಗನ್ನು ಹತ್ತಿದರು. ಅವರ ಕಣ್ಣುಗಳಲ್ಲಿ ಕೂಡ ಅಶ್ರುಧಾರೆ ತುಂಬಿ ಕಣ್ಣುಗಳು ಮಂಜಾದವು.  ಸ್ವಾಮಿ ವಿವೇಕಾನಂದರು ತನ್ನ ಪ್ರೀತಿಯ ಭಾರತವನ್ನು ದಿಟ್ಟಿಸಿ ನೋಡಿದರು. ಅವರ ಮನಸ್ಸು ಶಾಂತವಾಗಿತ್ತು. ರಾಮಕೃಷ್ಣರನ್ನು ಹಾಗೂ ಶಾರದಾದೇವಿಯವರನ್ನು ಮನಸ್ಸಿನಲ್ಲಿಯೇ ಪ್ರಾರ್ಥಿಸಿದರು.
ಹಡಗು ಹೊರಟಿತು. ಅವರ ಮುಖವನ್ನು ರಾಜಗಾಂಭೀರ್ಯ ಆವರಿಸಿತು. ಅವರು ಈಗ ಇಡೀ ವಿಶ್ವವನ್ನು ಅಲುಗಾಡಿಸಲು ಹೊರಟಿದ್ದಾರೆ. ತಮ್ಮ ವಾಗ್ವೈಕರಿಯ ಮೂಲಕ ಪಾಶ್ಚಾತ್ಯ ರಾಷ್ಟ್ರಗಳ ಸೊಕ್ಕನ್ನು ಹುಟ್ಟಡಗಿಸಲು ಸಿದ್ಧರಿದ್ದಾರೆ! ವೀರ ಕೇಸರಿಯಂತೇ ನಿಂತಿದ್ದಾರೆ!
ತಮ್ಮ ಮನಸ್ಸಿನಲ್ಲಿಯೇ ಹೇಳಿಕೊಂಡರು "ಹೌದು! ನಾನು ಈಗ ತ್ಯಾಗಭೂಮಿಯಿಂದ ಭೋಗಭೂಮಿಗೆ ಹೊರಟಿದ್ದೇನೆ"
ಆದರೆ ಅಲ್ಲಿಗೆ ಅವರು ಹೋಗುತ್ತಿರುವುದು ಅಲ್ಲಿನ ಭೋಗವನ್ನು ಅನುಭವಿಸುವುದಕ್ಕಲ್ಲ; ಇಲ್ಲಿನ ತ್ಯಾಗವನ್ನು ಬೋಧಿಸುವದಕ್ಕೆ!

Comments

Popular posts from this blog

ಕೃಷ್ಣಾವತಾರ

The Typhoon Arrives in America!