ಕೃಷ್ಣಾವತಾರ
ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ|
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್||
ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್|
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ||
ಇದು ಭಗವದ್ಗೀತೆಯ ನಾಲ್ಕನೇ ಅಧ್ಯಾಯದ ಏಳು ಹಾಗೂ ಎಂಟನೇ ಶ್ಲೋಕದಲ್ಲಿ ಶ್ರೀ ಕೃಷ್ಣನು ಅರ್ಜುನನಿಗೆ ಕೊಡುವ ಭರವಸೆ. ಇದರ ಅರ್ಥವೇನೆಂದರೆ - "ಹೇ ಭರತನೇ! ಯಾವಾಗ ಧರ್ಮದ ನಾಶ ಹಾಗೂ ಅಧರ್ಮವು ತಾಂಡವವಾಡುತ್ತವೋ ಅಲ್ಲಿ ನಾನು ಸಾಕಾರ ರೂಪದಿಂದ ಜಗತ್ತಿನ ಮುಂದೆ ಪ್ರಕಟನಾಗುತ್ತೇನೆ. ಸಾಧುಪುರುಷರನ್ನು ರಕ್ಷಿಸುವುದಕ್ಕಾಗಿ, ಅನ್ಯಾಯ ಮಾಡುವವರ ವಿನಾಶಕ್ಕಾಗಿ ಮತ್ತು ಧರ್ಮ ಸಂಸ್ಥಾಪನೆಗಾಗಿ ನಾನು ಯುಗ-ಯುಗಗಳಲ್ಲಿ ಮತ್ತೆ ಮತ್ತೆ ಹುಟ್ಟಿ ಬರುತ್ತೇನೆ!
ಕೃಷ್ಣ! ಹೆಸರು ಕೇಳಿದರೆ ಸಾಕು ಹೃದಯದಲ್ಲಿ ಭಾವನಾ ತರಂಗಗಳು ಉದ್ಭವಿಸುತ್ತವೆ! ಮನಸ್ಸು ತಕ್ಷಣವೇ ಗೋಕುಲ, ವೃಂದಾವನ, ಮಥುರೆಯನ್ನು ವಿಹರಿಸುಕೊಂಡು ಬರುತ್ತದೆ! ಹೃದಯದಲ್ಲಿ ಯಾವುದೇ ಖಿನ್ನತೆಯಿದ್ದರೂ ಸರ್ವನಾಶವಾಗಿ ಪ್ರೇಮದ ಜ್ವಾಲೆ ಹೊತ್ತಿ ಉರಿಯುತ್ತದೆ! ಭಾವ ಉಕ್ಕಿ ಬರುತ್ತದೆ! ತನ್ನ ಜೀವವನ್ನೇ ಇತರರಿಗಾಗಿಯೇ ಸವೆಸಿದ ಆ ಪ್ರೇಮಮಯಿಯನ್ನು ನೆನೆಸಿಕೊಂಡಾಗ ಇಂತಹ ಅಪರೂಪದ ಅನುಭವಗಳಾದರೆ ಅಚ್ಚರಿಯೇನಲ್ಲ ಬಿಡಿ!
ಕೃಷ್ಣ ಯಾರಿಗೆ ತಾನೇ ಇಷ್ಟವಿಲ್ಲ? ಪುಟ್ಟ ಮಕ್ಕಳಿಗೆ ಕೃಷ್ಣ 'ಬೆಣ್ಣೆ ಚೋರ'ನಾಗಿ ಕಂಡರೆ, ಯುವ ಪ್ರೇಮಿಗಳಿಗೆ ಈ ಗೋಪಾಲ 'Role Model' ಆಗಿ ಕಾಣುತ್ತಾನೆ! ಇನ್ನು ರಾಜರಿಗೆ ಅಥವಾ ಇಂದಿನ ಕೆಲವು ಜಾಗತಿಕ ನಾಯಕರಿಗೆ ಕೃಷ್ಣನ ರಾಜನೀತಿಗಳು ಆದರ್ಶವಾಗಿವೆ. ಇನ್ನು ಕೆಲವು ತರುಣರಿಗೆ ಕೃಷ್ಣನು 'ಯುಗಾಚಾರ್ಯ'ನಾಗಿ ಕಾಣುತ್ತಾನೆ.
ಈ ಯುಗಪುರುಷನ ಕೆಲವು ವಿಚಾರಗಳನ್ನು ನಾನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.
ಇಂದ್ರನ ದರ್ಪ ಸಂಹಾರ
ಅದೊಮ್ಮೆ ವೃಂದಾವನದಲ್ಲಿ ಹಬ್ಬದ ವಾತಾವರಣ. ಸಮಸ್ತ ಗೋಪಾಲಕರು ಯಜ್ಞದ ತಯಾರಿಯಲ್ಲಿ ನಿರತರಾಗಿದ್ದರು. ಬಾಲಕ ಕೃಷ್ಣನಲ್ಲಿ ಸಹಜವಾಗಿ ಕುತೂಹಲ ಕೆರಳಿತು. ತನ್ನ ತಂದೆ ನಂದಗೋಪನಿಗೆ ಈ ತಯಾರಿಗೆ ಕಾರಣವೇನೆಂದು ಕೇಳಿದಾಗ ಅವರು "ಮಗು! ನಾವು ಮಾಡುತ್ತಿರುವ ಈ ಯಜ್ಞವು ದೇವತೆಗಳ ಒಡೆಯನಾದ ಇಂದ್ರನನ್ನು ಪ್ರಸನ್ನಗೊಳಿಸುವುದಕ್ಕಾಗಿ! ಆತ ನಮಗೆ ಕಾಲ-ಕಾಲಕ್ಕೆ ಮಳೆಯಾಗುವಂತೆ ಮಾಡುವುದರಿಂದಲೇ ನಮ್ಮ ರೈತರು ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತಿರುವುದು. ಆದ್ದರಿಂದಲೇ ನಮ್ಮ ಹೊಟ್ಟೆ ತುಂಬುತ್ತಿರುವುದು"ಎಂದುತ್ತರಿಸಿದರು. ಯಾರೇ ಆದರೂ ಈ ಮಾತುಗಳಿಗೆ ತಲೆಯಾಡಿಸಿ 'ಹೂಂ' ಎಂದು ಒಪ್ಪಿಕೊಂಡು ಸುಮ್ಮನಾಗುತ್ತಿದ್ವಿ. ಆದರೆ ಕೃಷ್ಣ "ಅಪ್ಪ, ನಾವು ಗೋಪಾಲಕರು. ನಾವು ನಮ್ಮ ಜೀವನ ಪೂರ ಈ ಅರಣ್ಯಗಳಲ್ಲೇ ಕಳೆಯಬೇಕು. ನಮಗೆ ಈ ಪರ್ವತಗಳು, ಗಿಡ-ಮರಗಳು, ಪ್ರಕೃತಿಯೇ ದೇವರು. ಕಣ್ಣಿಗೆ ಕಾಣುವ ದೇವರನ್ನು ಪೂಜಿಸುವ ಬದಲು ಎಲ್ಲೋ ಇರುವ ದೇವರನ್ನು ಪೂಜಿಸೋದು ಎಷ್ಟು ಸರಿ?" ಎಂದು ಹೇಳಿಬಿಟ್ಟನು. ನಿಜ ದೇವನಿಲ್ಲದ ಜಾಗವಿಲ್ಲ. ನಾವು ಗಣೇಶನಿಗೆ ಕಡುಬುಗಳನ್ನು ಮಾಡಿ ನೈವೇದ್ಯ ಮಾಡುವುದೇ ಭಕ್ತಿ ಎಂದು ತಿಳಿದಿದ್ದೇವೆ! ಆದರೆ ಗಣೇಶನಿಗೆ ಬೇಕಿರುವುದು ನಾವು ಮಾಡುವ ತಿನಿಸುಗಳಲ್ಲ! ನಮ್ಮ ಹೃದಯದಲ್ಲಿರುವ 'ಪರಿಶುದ್ಧತೆ'! ಗಣೇಶ ಬಯಸೋದು ನಮ್ಮ ಈ ಹೃದಯ ಇನ್ನೊಬ್ಬರಿಗೆ ಮರುಗಲಿ ಅಂತ! ಕೃಷ್ಣನ ಸಲಹೆಯಂತೆ ಊರಿನವರು 'ಗೋವರ್ಧನ'ಗಿರಿಯನ್ನು ಪೂಜಿಸಲು ನಿಶ್ಚಯಿಸಿದರು. ಪೂಜೆಯ ದಿನ ಎಲ್ಲೆಲ್ಲೂ ಹರುಷವೋ-ಹರುಷ! ಬ್ರಾಹ್ಮಣರಿಗೆ ಗೋಧಾನ ಮಾಡಲಾಯಿತು. ಗೋವುಗಳಿಗೆ ಶೃಂಗಾರ ಮಾಡಲಾಯಿತು. ಒಟ್ಟಿನಲ್ಲಿ ವೃಂದಾವನದಲ್ಲಿ ಸಡಗರ ಮನೆಮಾಡಿತ್ತು. ಆದರೆ ಇಂದ್ರನಿಗೆ ಇದನ್ನು ಸಹಿಸಲಾಗಲಿಲ! ದೇವತೆಗಳ ರಾಜ ನಾನಿರುವಾಗ ಪ್ರಕೃತಿ ಹಾಗೂ ಕೃಷ್ಣನಿಗೆ ಸಿಕ್ಕ ಗೌರವ ಇಂದ್ರನನ್ನು 'ಅಸಹಿಷ್ಣು'ವನ್ನಾಗಿ ಮಾಡಿತು. ತನ್ನ ಐರಾವತವನ್ನೇರಿ ಭೂಲೋಕಕ್ಕೆ ಬಂದಿಳಿದನು. ತನ್ನ ಪ್ರಚಂಡ ಶಕ್ತಿಯಿಂದ ಗೋವರ್ಧನಗಿರಿಯ ಸುತ್ತ ಪ್ರದೇಶದಲ್ಲಿ ವರುಣಾರ್ಭಟವನ್ನು ಸೃಷ್ಟಿಸಿದನು! ಪರ್ವತ ಶ್ರೇಣಿಗಳಲ್ಲಿ ಗುಡುಗು-ಸಿಡಿಲು ಕಾಡ್ಗಿಚ್ಚಿನಂತೆ ವ್ಯಾಪಿಸಿತು. ಹಳ್ಳಿಯ ಪ್ರತಿಯೊಂದು ಮನೆಗೂ ನೀರು ನುಗ್ಗಿತು. ಜಾನುವಾರುಗಳು, ಜನರು ನೀರಿನಲ್ಲಿ ಕೊಚ್ಚಿಕೊಂಡುಹೋಹೋದರು. ಕ್ಷಣಮಾತ್ರದಲ್ಲಿ ಇಡೀ ಹಳ್ಳಿಯಲ್ಲಿ ಪ್ರವಾಹ ಉಂಟಾಯಿತು. ಕೃಷ್ಣನಿಗೆ ಇದರಲ್ಲಿ ಇಂದ್ರನ ಕೈವಾಡವಿದೆ ಎಂದು ತಿಳಿಯಿತು. ಇಂದ್ರನಿಗೆ ಸರಿಯಾದ ಪಾಠ ಕಲಿಸಬೇಕೆಂದು ಅವನು ನಿರ್ಧರಿಸಿದನು. ಸ್ವಲ್ಪವೂ ತಡಮಾಡದೇ ಇಡಿಯ ಗೋವರ್ಧನ ಪರ್ವತವನ್ನು ತನ್ನ ಕಿರುಬೆರಳಿನಲ್ಲಿ ಎತ್ತಿಹಿಡಿದು ನಿಂತನು! ತಮ್ಮ ಕಣ್ಣೆದುರಿಗೆ ನಡೆಯುತ್ತಿದ್ದ ಈ ಪವಾಡವನ್ನು ನೋಡಿದ ಜನ ಅವಕ್ಕಾಗಿ ನಿಂತರು.
ಸಕಲ ಜನರಿಗೂ ಪರ್ವತದ ಬುಡದಲ್ಲಿ ಆಶ್ರಯಿಸುವಂತೆ ಕೃಷ್ಣ ಎಲ್ಲರಿಗೂ ಸನ್ನೆ ಮಾಡಿದನು. ಅದರಂತೆ ಎಲ್ಲರೂ ತಮ್ಮ ದನ-ಕರುಗಳನೊಡನೆ ಗೋವರ್ಧನಗಿರಿಯ ತಪ್ಪಲಲ್ಲಿ ಆಶ್ರಯ ಪಡೆದರು. ಇಂದ್ರನಿಗೆ ಕೃಷ್ಣನು ನುಂಗಲಾರದ ತುತ್ತಾಗಿ ಪರಿಣಮಿಸಿದನು! ಹತ್ತು ದಿನಗಳಾದ ಮೇಲೆ ಇಂದ್ರನ ದರ್ಪ ಸಂಹಾರವಾಯಿತು. ಅವನು ಮಂಡಿಯೂರಿ ಕೃಷ್ಣನಿಗೆ ಕ್ಷಮೆಯಾಚಿಸಿದನು. ಹೀಗೆ ತನ್ನ ಶಕ್ತಿಯಿಂದ ಇಂದ್ರನಿಗೆ ಸವಾಲೊಡ್ಡಿದನು ಶ್ರೀ ಕೃಷ್ಣ.
ಕುರುಕ್ಷೇತ್ರದಲ್ಲಿ ಶ್ರೀ ಕೃಷ್ಣನ ರಣ-ಕಹಳೆ
ಧ್ಯೂತದಲ್ಲಿ ಕಪಟತನದಿಂದ ಕೌರವರು ಪಾಂಡವರನ್ನು ಮಣಿಸಿ ಅವರ ರಾಜ್ಯ ಸಂಪತ್ತನ್ನು ಕಸಿದುಕೊಂಡಾಗ ಕೃಷ್ಣನು ಪಾಂಡವರ ಪರವಾಗಿ ನಿಂತನು. ಸಂಧಾನಕ್ಕೆ ಕೃಷ್ಣನು ತೆರಳಿದಾಗ, 'ಕೃಷ್ಣ ಯಾರ ಆತಿಥ್ಯವನ್ನು ಸ್ವೀಕರಿಸುವನು' ಎಂಬ ಪ್ರಶ್ನೆ ಬಂದಾಗ '' ವಿದುರನ ಭಾಗ್ಯವಿದು'' ಎಂದು ದಾಸರು ಹಾಡುವಂತೆ ಕೃಷ್ಣ ವಿದುರನ ಮನೆಗೆ ಹೋದನು. ಸ್ವತಃ ಮಹಾ ಪರಾಕ್ರಮಿಯಾಗಿದ್ದರೂ ಸಹ "ನಾನು ಯುದ್ಧವನ್ನು ಮಾಡುವುದಿಲ್ಲ ಹಾಗೂ ಶಸ್ತ್ರವನ್ನು ತೊಡುವುದಿಲ್ಲ!"ಎಂದು ಪ್ರತಿಜ್ಞೆ ಮಾಡಿದ್ದನು! ಯುದ್ಧವಂತೂ ತಪ್ಪಿಸಲು ಅಸಾಧ್ಯವಾಗಿತ್ತು, ಆದರೆ ಕೃಷ್ಣನ ತಂತ್ರಗಳು ಕುರುಕ್ಷೇತ್ರ ಯುದ್ಧದ ದಿಕ್ಕನ್ನೇ ಬದಲಿಸಿದವು. ತನ್ನ ನೆಚ್ಚಿನ 'ಪಾರ್ಥ'ನ ಸಾರಥಿಯಾದನು ಶ್ರೀ ಕೃಷ್ಣ ಪರಮಾತ್ಮ! ರಥವನ್ನೇರಿದ ಅರ್ಜುನನು ಹಾಗೇ ಕೌರವರ ಸೇನೆಯನ್ನು ದಿಟ್ಟಿಸಿ ನೋಡಿದನು! ತನ್ನನ್ನು ಆಡಿಸಿ ಬೆಳೆಸಿದ ಹಾಗೂ ಪ್ರೀತಿಪಾತ್ರರಾದ ಭೀಷ್ಮ ಪಿತಾಮಹ, ಗುರು ದ್ರೋಣಾಚಾರ್ಯ, ಅಶ್ವತ್ಥಾಮ, ಕೃಪಾಚಾರ್ಯ, ಶಲ್ಯರನ್ನು ನೋಡಿದಾಗ ಅವನ ಮನದಲ್ಲಿ ದೌರ್ಬಲ್ಯ ಮನೆಮಾಡಿತು. ಇವರನ್ನೆಲ್ಲ ಕೊಂದು ಅವರ ಸಮಾಧಿಯ ಮೇಲೆ ರಾಜ್ಯ, ಭೋಗೈಶ್ವರ್ಯಗಳನ್ನೆಲ್ಲ ಅನುಭವಿಸುವುದರಲ್ಲಿ ಯಾವ ಧರ್ಮವಿದೆ? ನಾನು ಯುದ್ಧವನ್ನು ಮಾಡಲಾರೆ! ಎಂದು ತನ್ನ ಗಾಂಢೀವವನ್ನು ಬಿಸುಡು ನಿಂತಾಗ ಶ್ರೀ ಕೃಷ್ಣನು ಯುದ್ಧ ಭೂಮಿಯಲ್ಲೇ ಅರ್ಜುನನಿಗೆ ಹದಿನೆಂಟು ಅಧ್ಯಯಗಳ 'ಭಗವದ್ಗೀತೆ'ಯನ್ನೇ ಭೋದಿಸಿದನು.
ಯುದ್ಧವೇನೋ ಪ್ರಾರಂಭವಾಯಿತು, ಆದರೆ ಕೌರವರ ಸೈನ್ಯ ಅತ್ಯಂತ ಭಯಾನಕವಾಗಿತ್ತು. ಯುದ್ಧದ ಮೊದಲ ಒಂಭತ್ತು ದಿನಗಳು ಕೌರವರ ಅಧೀನದಲ್ಲಿತ್ತು. ಕೌರವರ ಸೇನಾಧಿಪತಿಯಾಗಿದ್ದ ಭೀಷ್ಮರು ನಿರ್ದಯೆವಾಗಿ ಪಾಂಡವರ ಸೈನ್ಯವನ್ನು ಉದ್ವಂಸಗೊಳಿಸಿದರು. ಹತ್ತನೇ ದಿನದಿಂದ 'ಕೃಷ್ಣ-ಲೀಲೆ' ಗಳು ಪ್ರಾರಂಭವಾದವು! ಕೃಷ್ಣನ ಉಪಾಯದಂತೆ ಶಿಖಂಡಿಯನ್ನು ಮುಂದಿಟ್ಟುಕೊಂಡು ಅರ್ಜುನನು 'ಮಾಹಾಪಿತ'ನನ್ನು ಕೊಂದನು. ತದನಂತರದಲ್ಲಿ ಬಂದ ದ್ರೋಣರು ಕಲಿಯಂತೆ ಹೋರಾಡಿದರು. ಪಾಂಡವರ ವಿಜಯಕ್ಕೆ ದ್ರೋಣರ ವಧೆ ಅತ್ಯಾವಶ್ಯಕ ಎಂದು ಕೃಷ್ಣನಿಗೆ ತಿಳಿದಿತ್ತು. ಅದೇ ವೇಳೆಗೆ ವಾಯುಪುತ್ರ ಭೀಮನು 'ಅಶ್ವತ್ಥಾಮ' ಎಂಬ ಆನೆಯನ್ನು ಕೊಂದಿದ್ದನು. ಕೃಷ್ಣನ ಸಲಹೆಯಂತೆ ಯುಧಿಷ್ಠಿರನು "ಅಶ್ವತ್ಥಾಮ ಹತಃ ಕುಂಜರ" ಎಂದು ಉದ್ಘೋಷಿಸಿದನು. ಆದರೆ ವಾಸುದೇವನ ಪಾಂಚಜನ್ಯ ಮೊಳಗಿದ್ದರಿಂದ ದ್ರೋಣರಿಗೆ "ಅಶ್ವತ್ಥಾಮನೇ ಪ್ರಾಣ ಬಿಟ್ಟನು!" ಎಂದು ಕೇಳಿಸಿತು. ಪುತ್ರಶೋಕದ ವ್ಯಾಕುಲತೆಯಿಂದ ದ್ರೋಣರು ಯುದ್ಧ ಮಾಡುವುದನ್ನು ನಿಲ್ಲಿಸಿಬಿಟ್ಟರು. ಈ ಪರಿಸ್ಥಿತಿಯ ಲಾಭ ಪಡೆದ ದೃಷ್ಟದ್ಯುಮ್ನನು ಸ್ವಲ್ಪವೂ ತಡ ಮಾಡದೆ ತನ್ನ ಖಡ್ಗದಿಂದ ದ್ರೋಣರನ್ನು ವಧಿಸಿದನು. ದ್ರೋಣಾಚಾರ್ಯರ ಅಂತ್ಯದ ನಂತರವೇ ತಾನು ರಣಭೂಮಿಗಿಳಿಯುತ್ತೇನೆಂದು ಶಪಥ ತೆಗೆದುಕೊಂಡಿದ್ದ ವೀರ ಕರ್ಣನು ಕುರುಕ್ಷೇತ್ರಕ್ಕೆ ಕಾಲಿಟ್ಟನು. ಸೂರ್ಯಾಸ್ತವಾಗುವುದರೊಳಗೆ ಕರ್ಣನನ್ನು ಸಂಹರಿಸುತ್ತೇನೆಂದು ಅರ್ಜುನನು ಪಣತೊಟ್ಟಿ ನಿಂತನು. ಬದ್ಧ ವೈರಿಗಳಾದ ಕರ್ಣಾರ್ಜುನರ ನಡುವೆ ಘೋರ ಯುದ್ಧ ನಡೆಯಿತು. ಸೂರ್ಯಾಸ್ತ ಆಗುತ್ತಿದ್ದಂತೆಯೇ ಕರ್ಣನ ಬಲ ಹೆಚ್ಚಾಯಿತು. ಅದೇ ಸಮಯಕ್ಕೆ ಕರ್ಣನ ರಥದ ಎಡಚಕ್ರವು ತೇವದ ಮಣ್ಣಿನಲ್ಲಿ ಸಿಲುಕಿಕೊಂಡಿತು. ಎಷ್ಟೇ ಪ್ರಯತ್ನಿಸಿದರೂ ರಥವನ್ನು ಮುನ್ನಡೆಸಲಾಗಲಿಲ್ಲ. ಕೊನೆಗೆ ಸ್ವತಃ ಕರ್ಣನೇ ರಥದಿಂದ ಕೆಳಗಿಳಿದು ಚಕ್ರವನ್ನು ಮಣ್ಣಿನಿಂದ ಬೇರ್ಪಡಿಸಲು ಮುಂದಾದನು. ಆಗ ಕೃಷ್ಣನು 'ಮಧ್ಯಮ ಪಾಂಡವನಿಗೆ' ಬಾಣ ಪ್ರಯೋಗ ಮಾಡಲು ಸನ್ನೆ ಮಾಡಿದನು. ವೀರ ಪಾರ್ಥ ತನ್ನ ದಿವ್ಯಾಸ್ತ್ರವನ್ನು ಪ್ರಯೋಗಿಸಿದನು. ಅರ್ಜುನನ ಬಾಣವು 'ಸೂರ್ಯಪುತ್ರ'ನ ಹೃದಯ ಸೀಳಿತು. ನೋವಿನಲ್ಲೇ ಕರ್ಣನು ಕೃಷ್ಣನಿಗೆ ಚೀಮಾರಿ ಹಾಕಿದನು- "ಹೇ ಯದುನಂದನ! ಇದೇನು ನಿನ್ನ ಧರ್ಮ? ಇದೇನ ನಿನ್ನ ಯುದ್ಧ ನೀತಿ? ಶಸ್ತ್ರಹೀನನಾಗಿದ್ದ ನನ್ನನ್ನು ಹೇಡಿಯಂತೆ ಕೊಲ್ಲಿಸಿದೆಯಲ್ಲಾ! ನಾಚಿಕೆಯಾಗಬೇಕು ನಿನಗೆ! ನೀನು ಹೇಳುವುದೊಂದು, ಮಾಡುವುದೊಂದು!" ಎಂದು. ತನ್ನ ಕಣ್ಣೆದುರಿಗೇ ಅಧರ್ಮದ ಬಾವುಟ ಮೇಲೇರುತ್ತಿರುವುದನ್ನು ಕಂಡ ಕೃಷ್ಣನ ಎದೆಯಲ್ಲಿ ಜ್ವಾಲೆ ಉರಿಯುತ್ತಿತ್ತು. ಅದರ ಪ್ರತಿಯಾಗಿ ಕೃಷ್ಣನು ಹೀಗೆ ಉತ್ತರಿಸಿದನು-"ಎಲೈ ಸೂರ್ಯಪುತ್ರನೇ! ಯಾವ ಧರ್ಮದ ಬಗ್ಗೆ ಮಾತನಾಡುತ್ತಿದ್ದೀಯ? ದ್ಯೂತದಲ್ಲಿ ಪಾಂಡವರನ್ನು ಮೋಸದಿಂದ ಸೋಲಿಸಿದ್ದು ಧರ್ಮವೇ? ತುಂಬಿದ ಸಭೆಯಲ್ಲಿ ಪಾಂಚಾಲಿಯ ವಸ್ತ್ರಾಪಹರಣ ಮಾಡಿದ್ದು ಉಚಿತವೇ? ಅರಗಿನ ಮನೆಯಲ್ಲಿ ಪಾಂಡವರನ್ನು ಜೀವಂತವಾಗಿ ದಹಿಸಲು ಹೋದದ್ದು ಸಮಂಜಸವೇ? ಭೀಮನಿಗೆ ವಿಷವುಣಿಸಿದ್ದು ಸರಿಯೇ? ಶಸ್ತ್ರಹೀನನಾಗಿದ್ದ ಅಭಿಮನ್ಯುವನ್ನು ಕೊಂದದ್ದು ನಿಮ್ಮ ಧರ್ಮವೇ? ಜಯದ್ರತನು ದ್ರೌಪದಿಯನ್ನು ಅಪಹರಿಸಿಕೊಂಡು ಹೋದದ್ದು ಧರ್ಮವೇ?ನಾನು ಮಾಡಿದ್ದು ತಪ್ಪೆಂದು ನಿಮಗನಿಸಬಹುದು. ಆದರೆ ಇತಿಹಾಸ ಮಾತ್ರ ನಾನು ಮಾಡಿದ್ದು ಧರ್ಮರಕ್ಷಣೆಗಾಗಿ ಎಂದು ಮತ್ತೆ ಮತ್ತೆ ನೆನೆಯುತ್ತದೆ". ಕೃಷ್ಣನ ಮಾತುಗಳನ್ನು ಕೇಳುತ್ತಲೇ ಕರ್ಣನು ಪ್ರಾಣ ಬಿಟ್ಟನು. ಹದಿನೆಂಟು ದಿನಗಳ ಕುರುಕ್ಷೇತ್ರ ಯುದ್ಧದಲ್ಲಿ, ಧರ್ಮವನ್ನೇ ಆರಾಧಿಸಿದ ಪಾಂಡವರು ವಿಜಯಶಾಲಿಯಾದರು.
ಇಷ್ಟೆಲ್ಲಾ ಆದರೂ "ಶ್ರೀ ಕೃಷ್ಣನು ಸದಾಕಾಲ ಧರ್ಮವನ್ನೇ ಬೋಧಿಸಿದನು. ಆದರೆ ಅವನು ಹೇಳಿದಂತೆ ನಡೆದುಕೊಳ್ಳಲಿಲ್ಲವಲ್ಲ?" ಎಂಬ ಪ್ರಶ್ನೆ ನಮ್ಮನ್ನು ಕಾಡುವುದು ಸಹಜ. ಇದಕ್ಕೆ ಕೃಷ್ಣನೇ ಉತ್ತರಿಸುತ್ತಾನೆ - "ಧರ್ಮ ಸಂಸ್ಥಾಪನೆಗಾಗಿ ನಾನು ಇವೆಲ್ಲಾ ಮಾಡಲೇಬೇಕಾಯಿತು. ಒಂದು ವೇಳೆ ಯುದ್ಧವನ್ನು ಕೌರವರು ಗೆದ್ದಿದ್ದರೆ, ಧರ್ಮಕ್ಕೆ ಬೆಲೆಯೇ ಇರುತ್ತಿರಲಿಲ್ಲ! ಮುಂದೆ ಎಲ್ಲಾ ಜೀವಿಗಳೂ ಕೂಡ ಅಧರ್ಮದ ಹಾದಿಯನ್ನೇ ಆರಿಸಿಕೊಳ್ಳುವರು! ಇಂದು ಪಾಂಡವರ ಜಯ ಕೇವಲ ಅವರ ಜಯವಲ್ಲ, ಧರ್ಮದ ಜಯ! ಯಾರು ಧರ್ಮವನ್ನು ರಕ್ಷಿಸುತ್ತಾರೋ, ಅವರನ್ನು ನಾನು ರಕ್ಷಿಸುತ್ತೇನೆ".
ದ್ವಾಪರಯುಗದಲ್ಲಿ ಪ್ರಕಟಗೊಂಡ ಈ 'ಕೃಷ್ಣಾವತಾರ' ಇಂದು ಜಗತ್ತಿಗೆ ಆದರ್ಶವಾಗಿದೆ. ಇಂದಿಗೂ ಅಧರ್ಮದ ಕೈ ಮೇಲಾದಾಗ "ಕೃಷ್ಣ ಬರುತ್ತಾನೆ!" ಎಂದು ನಾವು ನಂಬುತ್ತೇವೆ. ಈ ಜಗದಾಚಾರ್ಯನ ಜೀವನ ನಮಗೆಲ್ಲಾ ಪ್ರೇರಣೆಯಾಗಲಿ ಎಂದು ಹಾರೈಸುತ್ತ ಸದ್ಯಕ್ಕೆ ವಿರಮಿಸುತ್ತೇನೆ.
||ಧರ್ಮೋ ರಕ್ಷತಿ ರಕ್ಷಿತಃ||
||ಶ್ರೀ ಕೃಷ್ಣಾರ್ಪಣಮಸ್ತು||
Very nice
ReplyDeleteWell done supraj
ReplyDeleteGreat effort supraj
ReplyDelete