ಎಲ್ಲಿದ್ದಾನೆ ದೇವರು?


ಯಾರು ಈ ದೇವರು ? ದೇವರು ಇದ್ದಾನ ? ಹಾಗಾದರೆ ಎಲ್ಲಿದ್ದಾನೆ ? ಈ ಪ್ರಶ್ನೆ ಮನುಷ್ಯನಿಗೆ ತನ್ನ ಜೀವನದಲ್ಲಿ ಬರಲೇಬೇಕು . ಪ್ರಶ್ನೆನೇ ತುಂಬಾ ಚೆನ್ನಾಗಿದೆ . ಆದರೆ ಇದರ ಉತ್ತರ ಮಾತ್ರ ಅತ್ಯಂತ ಸರಳ ! ದೇವರು ಅನ್ನೋದು ಒಂದು 'ಶಕ್ತಿ ' . ಹೇಗೆ ಒಂದು ಯಂತ್ರವನ್ನು ಚಲಾಯಿಸಲು ಒಬ್ಬ ಮಾಲಿಕನ ಅವಶ್ಯಕತೆ ಇದೆಯೋ ಹಾಗೇ ಈ ಪ್ರಪಂಚ ಎಂಬ 'ಮಾಯೆ' ಯ ಸೂತ್ರಧಾರನು ಇರಲೇಬೇಕು ಅಲ್ವಾ ?
ನಾನು ಪ್ರಪಂಚವನ್ನು 'ಮಾಯೆ ' ಎಂದು ಕರೆದೆ ; ಯಾಕೆ ಗೊತ್ತಾ ? ವಾಸ್ತವವಾಗಿ ಈ 'ಪ್ರಪಂಚ ' ಅನ್ನೋದು ಇಲ್ವೇ ಇಲ್ಲ ! ಬದಲಾಗಿ ಇದು ನಮ್ಮ ಭ್ರಮೆ . ನಾವಿಲ್ಲಿ ಪದಪ್ರಯೋಗವನ್ನು ತಪ್ಪಾಗಿ ಮಾಡುತ್ತಿದ್ದೇವೆ ಅಷ್ಟೇ . ಪ್ರಪಂಚದ ಬದಲಾಗಿ ನಾವು 'ದೇವರು' ಎಂದು ಹೇಳಬೇಕಿತ್ತು. ಎಲ್ಲೆಲ್ಲೂ ದೇವರೇ ಆವೃತನಾಗಿರುವಾಗ ಈ ಜಗತ್ತಿಗೆ ಜಾಗ ಎಲ್ಲಿ ಸಿಗಬೇಕು ? ಆದ್ದರಿಂದ ಜಗತ್ತು ಅನ್ನೋದು ಒಂದು ಮಾಯೆ ಅಷ್ಟೇ . ಈ ಪ್ರಶ್ನೆ ನರೇಂದ್ರನಿಗೂ ಕೂಡ ಬಾಲ್ಯದಲ್ಲಿಯೇ ಬಂದಿತ್ತು . "ನೀವು ದೇವರನ್ನು ನೋಡಿದ್ದೀರ ?" ಎಂದು ಅನೇಕರಿಗೆ ಕೇಳಿದನು .
ಆದರೆ ಯಾರಿಂದಲೂ ಸೂಕ್ತ ಉತ್ತರ ಸಿಗಲಿಲ್ಲ . ಕೊನೆಗೆ ನರೇಂದ್ರನಿಗೆ ಅನಿಸಿತು "ಈ ಎಲ್ಲಾ ಜನರದ್ದು ಕೇವಲ ಬುಟಾಟಿಕೆ ಅಷ್ಟೇ ! ಪ್ರತಿಯೊಬ್ಬರೂ ದೇವರ ಪೂಜೆ ಮಾಡುತ್ತಾರೆ ಆದರೆ ಒಬ್ಬರೂ ಕೂಡ ದೇವರನ್ನು ನೋಡಿಲ್ಲ! ಏನಿದು ವಿಚಿತ್ರ ! "    ಕೊನೆಗೆ ನರೇಂದ್ರನಿಗೆ ರಾಮಕೃಷ್ಣ ಪರಮಹಂಸರ ಭೇಟಿಯಾಯಿತು . ರಾಮಕೃಷ್ಣರು ನರೇಂದ್ರನನ್ನು ನೋಡುತ್ತಿದ್ದಂತೆ "ನರೇನ್ ! ಏನಪ್ಪ ಇಷ್ಟು ದಿನ ಎಲ್ಲಿದ್ದೆ? ಈ ಬಡಪಾಯಿನ ಇಷ್ಟು ವರ್ಷ ಕಾಯುವಂತೆ ಮಾಡಿದೆ ನೀನು ! " ರಾಮಕೃಷ್ಣರ ಈ ವರ್ತನೆಯನ್ನು ಕಂಡು ನರೇಂದ್ರನಿಗೆ ಅನಿಸಿತು "ಬಹುಶಃ ನಾನು ಯಾವುದೇ ಒಬ್ಬ ಹುಚ್ಚನ ಬಳಿ ಬಂದಿದ್ದೇನೆ . ಇವರು ದೇವರನ್ನು ನೋಡಿರಲು ಸಾಧ್ಯವೇ ಇಲ್ಲ " . ಆದರೂ ಒಮ್ಮೆ ಕೇಳಿ ನೋಡೋಣ ಎಂದು "ಮಹಾಶಯರೇ ! ನೀವು ದೇವರನ್ನು ನೋಡಿದ್ದೀರ? " ಎಂದು ಕೇಳಿದನು. ರಾಮಕೃಷ್ಣರು ತಕ್ಷಣ "ಖಂಡಿತ! ನಿನ್ನ ಜೊತೆ ಹೇಗೆ ಮಾತನಾಡುತ್ತೇನೋ ಹಾಗೆ ನಾನು ಕಾಳಿಯ ಜೊತೆ ಮಾತನಾಡುತ್ತೇನೆ ! ಗೊತ್ತೇನು ನಿನಗೆ ? " ಎಂದು ಹೇಳಿದರು . ನರೇಂದ್ರನಿಗೆ ಸಿಡಿಲು ಬಡಿದಂತೆ ಆಯಿತು . ಜೀವನದಲ್ಲಿ ದೇವರನ್ನು ನೋಡಿರುವ ವ್ಯಕ್ತಿಯನ್ನು ಮೊದಲನೇಯ ಬಾರಿಗೆ ನೋಡಿದಾಗ ಅವನಿಗೆ ಎಂತಹ ಆನಂದವಾಗಿರಬಹುದು! ಆದರೆ ನರೇಂದ್ರ ಇಷ್ಟಕ್ಕೇ ತೃಪ್ತನಾಗುವನೇ? ಅವನು ಹೇಳಿದನು " ಹಾಗಾದರೆ ಆ ನಿಮ್ಮ ಕಾಳಿಯನ್ನು ನನಗೂ ತೋರಿಸುವಿರ ? " ರಾಮಕೃಷ್ಣರ ಉತ್ತರವನ್ನು ನೆನೆಸಿಕೊಂಡರೆ ಇವತ್ತಿಗೂ ರೋಮಾಂಚನವಾಗುತ್ತದೆ! ರಾಮಕೃಷ್ಣರು ಹೇಳುತ್ತಾರೆ "ಅಯ್ಯೋ ಹುಚ್ಚ! ನಿನಗೆ ತೋರಿಸದೆ ಇನ್ನ್ಯಾರಿಗೆ ತೋರಿಸಲಿ ? ಆದರೆ ಒಂದು ಮಾತು ನೆನಪಿಗೆ ಇಟ್ಟುಕೊ . ನೀನು ಈ ಜಗತ್ತಿನ ಜನರಿಗೆ ಗರ್ಭಗುಡಿಯಲ್ಲಿರುವ ದೇವರನ್ನು ತೋರಿಸಲು ಬಂದವನಲ್ಲ ಆದರೆ ಪ್ರತಿಯೊಬ್ಬ ಮಾನವನ ಹೃದಯದಲ್ಲಿ ಅದೇ ಭಗವಂತ ನೆಲೆಸಿರುವನು ಎಂದು ತೋರಿಸಲಿಕ್ಕೇ ನೀನು ಬಂದವನು ! " ಅದರ ಬಗ್ಗೆ ಆಮೇಲೆ ಮಾತಾಡೋಣ . ನಾವು ದೇವರನ್ನು ಬೇರೆ ಬೇರೆ ರೀತಿಯಲ್ಲಿ ಪೂಜಿಸುತ್ತೇವೆ . ಉದಾಹರಣೆಗೆ 'ಶಿವ'  'ನಾರಾಯಣ '  ' ಹನುಮಂತ '   ಮುಂತಾದ ಹೆಸರುಗಳಿಂದ ಪೂಜಿಸುತ್ತೇವೆ . ದೇವರು ಒಂದೇ ಎಂದು ಹೇಳುತ್ತಾರೆ . ಹಾಗಾದರೆ ನಾವು ಮಾಡುತ್ತಿರುವುದು ಸರಿಯೇ?  ಖಂಡಿತವಾಗಿಯೂ ಸರಿ . ಯಾಕೆಂದರೆ ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನೇ ಹೇಳುತ್ತಾನೆ "ಭಕ್ತರು ಯಾವ ರೂಪದಲ್ಲಿ ನನ್ನನ್ನು ನೋಡಲು ಬಯಸುತ್ತಾರೋ ನಾನು ಅದೇ ರೂಪದಲ್ಲಿ ಅವರಿಗೆ ದರ್ಶನ ಮಾಡುತ್ತೇನೆ ! " ಎಂದು. ಹಾಗಾಗಿ ನಾವು  ತಂದೆ ತಾಯಿಯರಲ್ಲಿ; ಗುರು-ಹಿರಿಯರಲ್ಲಿ ದೇವರನ್ನು ಕಾಣುತ್ತೇವೆ.  ಇದನ್ನು ನಾವು ವಿವೇಕಾನಂದರ ಜೀವನದಲ್ಲಿ ಅರ್ಥ ಮಾಡಿಕೊಳ್ಳಬಹುದು. ಒಂದು ದಿನ ರಾಮಕೃಷ್ಣರು ತರಗತಿಯನ್ನು ತೆಗೆದುಕೊಳ್ಳುತ್ತಿದ್ದರು. ಆಗ ಒಬ್ಬ ಶಿಷ್ಯ ಗ್ರಂಥವೊಂದನ್ನು ಓದುವಾಗ ಒಂದು ವಾಕ್ಯವನ್ನು ಗಟ್ಟಿಯಾಗಿ ಓದಿದನು 'ಜೀವಿಗಳಿಗೆ ದಯೆ ತೋರಬೇಕು' ಎಂದು. ಇದನ್ನು ಕೇಳಿದ ರಾಮಕೃಷ್ಣರು "ಏನು?   ಜೀವಿಗಳಿಗೆ ದಯೆ ತೋರಲು ನೀನೇನು ದೇವರೆ? ಜೀವಿಗಳಿಗೆ 'ಸೇವೆ ' ಮಾಡಲು ಮಾತ್ರ ನಮಗೆ ಅಧಿಕಾರ ಇರುವುದು ! "    ನಿಜ!  ಎಂಥಾ ಅರ್ಥಪೂರ್ಣವಾದ ಮಾತು. ಮುಂದೆ ಸ್ವಾಮಿ ವಿವೇಕಾನಂದರು ಗುಡುಗಿದರು "ಹಿಂದಿನ ಶಾಸ್ತ್ರ ಹೇಳಿತು 'ಮಾತೃದೇವೋಭವ'  'ಪಿತೃದೇವೋಭವ'  'ಆಚಾರ್ಯದೇವೋಭವ' ಎಂದು. ಆದರೆ ಇಂದು ನಾನು ಹೇಳುತ್ತೇನೆ 'ಪಾಪಿದೇವೋಭವ'  'ಮೂರ್ಖದೇವೋಭವ'  'ದರಿದ್ರದೇವೋಭವ'  ಎಂದು!  ದೇವರು ಎಲ್ಲಿದ್ದಾನೆ ಎಂಬ ಪ್ರಶ್ನೆಗೆ ವಿವೇಕಾನಂದರು ಅಂದೇ ಅದ್ಭುತವಾದ ಉತ್ತರವನ್ನು ನೀಡಿದರು . ಬಹುಶಃ ಒಬ್ಬ 'ಮ್ಲೇಚ್ಛ ' ಎಂಬ ಕರೆಯಲ್ಪಡುವ ಮನುಷ್ಯನಲ್ಲೂ ದೇವರಿದ್ದಾನೆ ಎಂದು ಸಾರಿದ ಮೊದಲ ವ್ಯಕ್ತಿಯೆಂದರೆ ಅದು 'ಸ್ವಾಮಿ ವಿವೇಕಾನಂದರೇ'. ನಾವು ಇಂದು ಮನುಷ್ಯರ ಸೇವೆಯಲ್ಲಿ ತೊಡಗಬೇಕು. ನಮ್ಮ ದೇಶದಲ್ಲಿ ಬಡವರ ಸಂಖ್ಯೆ ಕಡಿಮೆಯಾಗಿಲ್ಲ. ನಾವು ದೀನರಿಗಾಗಿ ಮರುಗಬೇಕು. ಅವರಿಗಾಗಿ ಕಣ್ಣೀರನ್ನು ಹಾಕಬೇಕು . ಅವರ ಸೇವೆಯಲ್ಲೇ ಈ ಜೀವನ ಕಳೆಯಬೇಕು . ಅದೇ ನಮಗೆ ಭಗವಂತನ ಸಾಕ್ಷಾತ್ಕಾರ . ನಾವು 'ದರಿದ್ರನಾರಾಯಣ' ವೆನ್ನಬೇಕು!  ಅವರಲ್ಲೇ ದೇವರು ನೆಲೆಸಿದ್ದಾನೆ . ಬಡವರಿಗೆ ಮರುಗದವನು  ಹುಟ್ಟಿದ್ದೂ ವ್ಯರ್ಥ! ಬಡವರ ಸೇವೆ ಮಾಡಿದವನಿಗೆ ಮುಕ್ತಿ ದೊರೆಯುತ್ತದೆ ! ಬನ್ನಿ ನಾವೂ ಕೂಡ ಆ ಬಡವರ ಸೇವೆಯನ್ನು ಮಾಡುತ್ತಾ ನಮ್ಮ ಈ ಜೀವನವನ್ನು ತೇಯ್ದು ಬಿಡೋಣ. 

Comments

Popular posts from this blog

ಕೃಷ್ಣಾವತಾರ

The Typhoon Arrives in America!

ವೀರಕೇಸರಿ ವಿವೇಕಾನಂದ!